ಶೃತಿ ಹರಿಹರನ್ (2 ಫೆಬ್ರವರಿ 1989), ಪ್ರಧಾನವಾಗಿ ಕನ್ನಡ ಸಿನೆಮಾಗಳಲ್ಲಿ ನಟಿಸುವ ಭಾರತೀಯ ನಟಿ. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಇವರು ರಂಗಭೂಮಿಯಲ್ಲಿ ನಟಿಸಿ, ಚಿತ್ರಗಳಲ್ಲಿ ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡಿದ ನಂತರ ಚಲನಚಿತ್ರಗಳಲ್ಲಿ ನಟಿಸುವ ವೃತ್ತಿಯನ್ನು ಆರಂಭಿಸಿದರು. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಎರಡು ಫಿಲಂ ಫೇರ್ ಅವಾರ್ಡ್ ಸೌತ್ ಪ್ರಶಸ್ತಿ, ಸೈಮಾ ಪ್ರಶಸ್ತಿ ಮತ್ತು ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ (ವಿಶೇಷ ಉಲ್ಲೇಖ) ಪಡೆದ ಶ್ರುತಿ, ಬೆಂಗಳೂರು ಟೈಮ್ಸ್ ಪತ್ರಿಕೆಯ 2018ರ ಅತ್ಯಂತ ಅಪೇಕ್ಷಣೀಯ ಮಹಿಳೆ ಆಯ್ಕೆಯಾಗಿದ್ದರು. 2012ರ ಮಲಯಾಳಂ ಭಾಷೆಯ ಸಿನಿಮಾ ಕಂಪನಿ ಇವರು ನಟಿಸಿದ ಮೊದಲ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಇವರ ಮೊದಲ ಚಿತ್ರ ಲೂಸಿಯಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಉರ್ವಿ, ನಾತಿಚರಾಮಿ, ಬ್ಯೂಟಿಫುಲ್ ಮನಸುಗಳು ಚಿತ್ರಗಳಲ್ಲಿನ ನಟನೆಗೆ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಸಾರ್ವಜನಿಕ ಮನ್ನಣೆಯನ್ನು ಪಡೆದಿದ್ದಾರೆ. 2016ರಲ್ಲಿ ಶೃತಿ ಹರಿಹರನ್ ರವರು ತಮ್ಮ ನಿರ್ಮಾಣ ಸಂಸ್ಥೆ 'ಕಲಾತ್ಮಕ'ವನ್ನು ಸ್ಥಾಪಿಸಿದರು. == ಆರಂಭಿಕ ಜೀವನ == ಶೃತಿ ಹರಿಹರನ್ ರವರು ಕೇರಳದ ತಿರುವನಂತಪುರದಲ್ಲಿ ತಮಿಳು ಅಯ್ಯರ್ ಕುಟುಂಬದಲ್ಲಿ ಜನಿಸಿದರು ಆದರೆ ಇವರು ಬೆಳೆದದ್ದು ಬೆಂಗಳೂರಿನಲ್ಲಿ. ಇವರ ಮಾತೃಭಾಷೆ ತಮಿಳು. ಇವರು ಸಿಶು ಗೃಹ ಮಾಂಟೆಸರಿ ಮತ್ತು ಪ್ರೌಢಶಾಲೆಯಲ್ಲಿ ಓದಿದರು. ಪ್ರೌಢಶಾಲೆಯ ನಂತರ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಬಿಎಂ ಪದವಿ ಪಡೆದರು. ಶೃತಿರವರು ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ. ತಮ್ಮ ಮಾತೃಭಾಷೆಯನ್ನು ಹೊರತುಪಡಿಸಿ ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳನ್ನು ಮಾತನಾಡಬಲ್ಲರು. ಇವರು ಕ್ರೈಸ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಸಾಂಸ್ಕೃತಿಕ ತಂಡದ ಭಾಗವಾಗಿದ್ದರು. ಈ ಆಸಕ್ತಿಯು ಅವರನ್ನು ರಂಗಭೂಮಿಯಲ್ಲಿ ನಟಿಸುವಂತೆ ಮಾಡಿತು. ಇವರು ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾರವರ ನೃತ್ಯ ತಂಡವನ್ನು ಸೇರಿದರು ಮತ್ತು ಕನ್ನಡ ಚಿತ್ರರಂಗದಲ್ಲಿ ಸಹಾಯಕ ನೃತ್ಯ ಸಂಯೋಜಕಿ ಮತ್ತು ಹಿನ್ನೆಲೆ ನೃತ್ಯಗಾರ್ತಿಯಾಗಿ ಕೆಲಸ ಮಾಡಿದರು. ಮೂರು ವರ್ಷಗಳ ಕಾಲ ನೃತ್ಯಗಾರ್ತಿಯ ಕೆಲಸ ಮಾಡಿ ಹಲವು ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. == ವೃತ್ತಿಜೀವನ == ಶೃತಿರವರ ಚಲನಚಿತ್ರ ವೃತ್ತಿಜೀವನವು ಮಲಯಾಳಂ ಚಿತ್ರ ಸಿನೆಮಾ ಕಂಪನಿಯೊಂದಿಗೆ ಪ್ರಾರಂಭವಾಯಿತು. ಇವರು ಎರಡು ಚಿತ್ರಗಳಲ್ಲಿ ನಟಿಸಿದರು, ತೆಕ್ಕು ತೆಕ್ಕೊರು ದೇಶತು ಮತ್ತು ಕಾಲ್ ಮೀ @. ಫ್ರಾನ್ಸಿಸ್ ರವರ ಕಾಲ್ ಮಿ @ ಚಿತ್ರದಲ್ಲಿ ಐಟಿ ಹುಡುಗಿಯಾಗಿ ಮತ್ತು ನಂದುರವರ ತೆಕ್ಕು ತೆಕ್ಕೊರು ದೇಶತು ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ. ಪವನ್ ಕುಮಾರ್ ರವರ ಕನ್ನಡ ಚಿತ್ರ ಲೂಸಿಯಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ಆಯ್ಕೆಯಾದರು. ಇದರಲ್ಲಿ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ - ಕೆಳಮಧ್ಯಮ ವರ್ಗದ ಹುಡುಗಿ ಮತ್ತು ಚಿತ್ರನಟಿ. ಲೂಸಿಯಾ ಚಿತ್ರವೂ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯಿತು ಮತ್ತು ಹಲವಾರು ಭಾಷೆಗಳಲ್ಲಿ ಮರು ನಿರ್ಮಾಣವಾಯಿತು. ಶೃತಿರವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಮತ್ತು ರೆಡಿಫ್ ಅವರ "ಮೋಸ್ಟ್ ಇಂಪ್ರೆಸಿವ್ ಕನ್ನಡ ಮೂವಿ ಡಿಬುಟ್ಸ್, 2013" ಪಟ್ಟಿಯಲ್ಲಿ ಕಾಣಿಸಿಕೊಂಡರು. ಅದೇ ವರ್ಷ ಇನ್ನೊಂದು ಕನ್ನಡ ಚಿತ್ರ ದ್ಯಾವ್ರೇದಲ್ಲಿ ಕಾಣಿಸಿಕೊಂಡರು. ನಿರ್ದೇಶಕ ಹರ್ಷರವರ ಶಿವರಾಜ್ಕುಮಾರ್ ಅಭಿನಯದ ಭಜರಂಗಿ ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು, ಆದರೆ ಈ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. 2014ರಲ್ಲಿ, ಜೇಕಬ್ ವರ್ಗೀಸ್ ರವರ ಸವಾರಿ 2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೋಡಿಯಾಗಿ ಕಾಣಿಸಿಕೊಂಡರು. ಶೃತಿರವರ ಮುಂದಿನ ಪಾತ್ರ ಅವರ ಮೊದಲ ತಮಿಳು ಚಿತ್ರ ಲಕ್ಷ್ಮಿ ರಾಮಕೃಷ್ಣನ್ ನಿರ್ದೇಶನದ ನೆರುಂಗಿ ವಾ ಮುತ್ತಮಿಡತೆ. ನಂತರ ಇವರು ಎ.ಪಿ.ಅರ್ಜುನ್ ರವರ ರಾಟೆ ಚಿತ್ರದಲ್ಲಿ ನಟಿಸಿದರು, ಇದಕ್ಕೆ ಲೂಸಿಯಾ ಬಿಡುಗಡೆಗೆ ಮುನ್ನವೇ ನಟಿಸಲು ಸಹಿ ಹಾಕಿದ್ದರು. ಈ ಚಿತ್ರದಲ್ಲಿ ಅವರ ಪಾತ್ರ ಸಾಂಪ್ರದಾಯಿಕ ಹಳ್ಳಿ ಹುಡುಗಿಯ ಪಾತ್ರವಾಗಿತ್ತು. ಮುಂದೆ ಅವರು ಏಕಕಾಲಕ್ಕೆ ರಜತ್ ಮಾಯಿ ನಿರ್ದೇಶನದ ಕನ್ನಡ ಚಿತ್ರ ಸಿಪಾಯಿ ಮತ್ತು ತಮಿಳಿನ ಕಲಾತ್ಮಕ ಚಿತ್ರ ನಿಲಾದಲ್ಲಿ ನಟಿಸಿದರು. ಇದರ ಜೊತೆಗೆ ಇವರು ಮತ್ತೊಂದು ಕನ್ನಡ ಚಿತ್ರ ಹೇಮಂತ್ ರಾವ್ ರವರ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಬಾಲಾಜಿ ಶಕ್ತಿವೇಲ್ ನಿರ್ದೇಶನದ ರಾ ರಾ ರಾಜಶೇಖರ್ ಚಿತ್ರವನ್ನು ಒಪ್ಪಿಕೊಂಡರು. ಗೋಧಿ ಬಣ್ಣ ಸಾಧಾರಣ ಮೈಕಟ್ಟು ವಿಮರ್ಶಾತ್ಮಕವಾಗಿ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಗಳಿಸಿತು. ಇವರು ಮಾಡಿದ ಡಾ||ಸಹನಾ ಪಾತ್ರ ಮನೆ ಮಾತಾಯಿತು. ನಂತರ ಮನೋಮೂರ್ತಿಯವರು ನಿರ್ಮಿಸಿದ ಮಾದ ಮತ್ತು ಮಾನಸಿ ಚಿತ್ರದಲ್ಲಿ ಕಾಣಿಸಿಕೊಂಡರು. ಪ್ರದೀಪ್ ವರ್ಮಾರವರ ಉರ್ವಿ, ನಂತರ ಬ್ಯೂಟಿಫುಲ್ ಮನಸುಗಳು ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಯಶಸ್ಸು ಪಡೆದರು. ವೈವಿಧ್ಯಮಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಇವರು ಕಮರ್ಷಿಯಲ್ ಮತ್ತು ಕಾರ್ಯಕ್ಷಮತೆ ಆಧಾರಿತ ಪಾತ್ರಗಳ ನಡುವೆ ಸಮತೋಲನವನ್ನು ಸಾಧಿಸಿದರು. ಇವರು ಮುಂದೆ ಕನ್ನಡದ ಬಹು-ತಾರಾಗಣದ ಹ್ಯಾಪಿ ನ್ಯೂ ಇಯರ್ ನಲ್ಲಿ ಕಾಣಿಸಿಕೊಂಡರು, ಇದರಲ್ಲಿ ಇವರು ಸೋರಿಯಾಸಿಸ್ ನಿಂದ ಬಳಲುತ್ತಿರುವ ಹಾಸಿಗೆ ಹಿಡಿದ ರೋಗಿಯ ಪಾತ್ರವನ್ನು ನಿರ್ವಹಿಸಿದರು. ದ್ವಿಭಾಷಾ ಚಿತ್ರವಾದ ವಿಸ್ಮಯ (ಕನ್ನಡ), ತಮಿಳಿನಲ್ಲಿ ನಿಬುಣನ್ ನಲ್ಲಿ ಕಾಣಿಸಿಕೊಂಡ ನಂತರ ದರ್ಶನ್ ರವರೊಂದಿಗೆ ಯಶಸ್ವಿ ಚಿತ್ರ ತಾರಕ್ ನಲ್ಲಿ ಕಾಣಿಸಿಕೊಂಡರು. == ವೈಯಕ್ತಿಕ ಜೀವನ == ಅವರ ಸಂಗಾತಿ ರಾಮ್ ಕುಮಾರ್ ಅವರು ಸಮರ ಕಲಾವಿದ ಮತ್ತು ತರಬೇತುದಾರರಾಗಿದ್ದಾರೆ. ಅವರಿಗೆ ೨೦೧೯ ರಲ್ಲಿ ಜಾನಕಿ ಎಂಬ ಮಗಳು ಜನಿಸಿದಳು. == ನಟಿಸಿರುವ ಚಿತ್ರಗಳು == == ಉಲ್ಲೇಖಗಳು ==